ಪ್ರವರ್ತನೆ ಮತ್ತು ನಿಯಂತ್ರಣೆ-
	ಸ್ಥಗಿತ ಯಂತ್ರ ಕಾರ್ಯೋದ್ಯುಕ್ತವಾಗುವಂತೆ ಮಾಡುವುದೇ ಪ್ರವರ್ತನೆ (ಸ್ಟಾರ್ಟಿಂಗ್); ಬಳಿಕ ಅದರ ಚಲನವೇಗವನ್ನು ಹಿಡಿತದಲ್ಲಿಟ್ಟು ಕ್ರಮಬದ್ಧವಾಗಿ ಕೆಲಸ ನಡೆಸಿಕೊಳ್ಳುವುದೇ ನಿಯಂತ್ರಣೆ (ಕಂಟ್ರೋಲಿಂಗ್) ಯಾವುದಾದರೂ ಇಂಧನ ಅಥವಾ ಶಕ್ತಿ ಮಾಧ್ಯಮವನ್ನು ಉಪಯೋಗಿಸಿಕೊಂಡು ಎಂಜಿನ್ನುಗಳು ಶಕ್ತ್ಯುತ್ಪಾದನೆ ಮಾಡುತ್ತವೆ. ನಿರ್ದಿಷ್ಟ ಕ್ರಮದಲ್ಲಿ ಕೆಲವು ಕ್ರಿಯೆಗಳು ನಡೆಯುವುದರಿಂದ ಅಧಿಕ ಶಕ್ತಿಯ ಉತ್ಪಾದನೆ ಸಾಧ್ಯ. ಒಮ್ಮೆ ಶಕ್ತ್ಯುತ್ಪಾದನೆ ಆದ ಬಳಿಕ ಅದರ ಸ್ಪಲ್ಪಭಾಗ ಎಂಜಿನ್ನಿನ ಚಲನಶೀಲ ಭಾಗಗಳನ್ನು ಚಲಿಸುವಂತೆ ಮಾಡಲು ಉಪಯೋಗವಾಗುತ್ತದೆ. ಕೊಂತದ ಎಂಜಿನ್ನುಗಳಲ್ಲಿ ಮೊದಲಬಾರಿಗೆ ಶಕ್ತಿಯ ಉತ್ಪಾದನೆ ಮಾಡುವಾಗ ಈ ಅವಕಾಶ ಇರುವುದಿಲ್ಲ. ಎಂಜಿನ್ನಿನ ಚಲನಶೀಲ ಭಾಗಗಳನ್ನು ಬೇರೆ ವಿಧಾನದಿಂದ ಚಲಿಸುವಂತೆ ಮಾಡಿ ಶಕ್ತಿಯನ್ನು ಉತ್ಪಾದಿಸಬೇಕಾಗುತ್ತದೆ. ಇದೇ ಪ್ರವರ್ತನೆಗೊಳಿಸುವುದು. ಆವಿ ಎಂಜಿನ್, ತಿರುಬಾನಿ ಮುಂತಾದ ಶಕ್ತ್ಯುತ್ಪಾದಕಗಳಲ್ಲಿ ಈ ಸಮಸ್ಯೆ ಇಲ್ಲ. ಆದ್ದರಿಂದ ಅವನ್ನು ಪ್ರತ್ಯೇಕವಾಗಿ ಪ್ರವರ್ತಿಸಬೇಕಾದ ಅಗತ್ಯವಿಲ್ಲ. ಕೊಂತದ ಎಂಜಿನ್ನುನಗಳು ನಿರ್ದಿಷ್ಟ ಕನಿಷ್ಟ ಜವಕ್ಕಿಂತ ಕಡಿಮೆ ಜವದಲ್ಲಿ ಓಡಲಾರವು. ಆದ್ದರಿಂದ ನಿಲುಗಡೆಯ (ಸ್ಟ್ಯಾಂಡ್ ಸ್ಟಿಲ್) ರೋಧವನ್ನು ಎದುರಿಸಿ ಎಂಜಿನ್ ತನ್ನ ಮೇಲೆ ತಾನೇ ಆಧಾರವಾಗುವ ಜವ ಮುಟ್ಟುವತನಕ ತಿರುಗಣೆ (ಕ್ರಾಂಕಿಂಗ್) ಅಗತ್ಯ. ಇದನ್ನು ಆಗಗೊಳಿಸುವ ವಿವಿಧ ವಿಧಾನಗಳುಂಟು. ಕೈಯಿಂದಲೇ ವಕ್ರದಂಡವನ್ನು ತಿರುಗಿಸುವುದರಿಂದ ಸಿಲಿಂಡರಿನಲ್ಲಿ ಕೊಂತ ಹಿಂದು ಮುಂದು ಸಂಕೋಚಿಸುತ್ತದೆ. ವಿದ್ಯುತ್ ಕಿಡಿ ಹಾರಿ ಜ್ವಲನವಾದಾಗ (ಇಗ್ನಿಷನ್) ಶಕ್ತ್ಯುತ್ಪಾದನೆ ಆಗುತ್ತದೆ. ಡೀಸಲ್ ಎಂಜಿನ್ನುಗಳಲ್ಲಿ ಸಂಕೋಚನವೇ ಜ್ವಲನೆಯನ್ನು ಉಂಟುಮಾಡಿ ಇಂಧನವನ್ನು ಹೊತ್ತಿಸುತ್ತದೆ.

	ಸಣ್ಣ ಎಂಜಿನ್ನುಗಳಲ್ಲಿ ಕೈ ತಿರುಗಣಿ ಸಾಧ್ಯ. ಆದರೆ ಅಧಿಕ ಶಕ್ತಿಯನ್ನು ಉತ್ಪಾದಿಸುವ ದೊಡ್ಡ ಎಂಜಿನ್ನುಗಳಲ್ಲಿ ಇದು ಸಾಧ್ಯವಾಗದು. ದೊಡ್ಡ ಎಂಜಿನ್ನುಗಳಿಗೆ ಸಣ್ಣ ಪೆಟ್ರೋಲ್ ಎಂಜಿನ್ನುಗಳನ್ನು ಯುಗ್ಮನಗೊಳಿಸಲಾಗುವುದು (ಕಪ್ಲಿಂಗ್) ಕೈತಿರುಗಣೆಯಿಂದ ಸಣ್ಣ ಎಂಜಿನ್ನನ್ನು ಓಡಿಸಿದಾಗ ಯುಗ್ಮನಗೊಳಿಸಿರುವ ದೊಡ್ಡ ಎಂಜಿನ್ ಸಹ ಓಡುತ್ತದೆ. ಅದು ಶಕ್ತ್ಯುತ್ಪಾದನೆ ಪ್ರಾರಂಭಿಸಿದ ಒಡನೆ ಸಣ್ಣ ಎಂಜಿನ್ನಿನ ಯುಗ್ಮನವನ್ನು ಕಡಿಯಬಹುದು. ಸ್ವಯಂಚಲಿ (ಅಟೊಮೊಬೀಲ್) ಮತ್ತು ಆ ರೀತಿಯ ಇತರ ಎಂಜಿನ್ನುಗಳಿಗೆ ಪ್ರವರ್ತಕಗಳನ್ನು (ಸ್ಟಾರ್ಟರ್ಸ್) ಜೋಡಿಸುವುದು ಹೆಚ್ಚು ಸಾಮಾನ್ಯ. ಅಗತ್ಯವಾದ ತಪ್ಪಿಸಿಕೊಳ್ಳುವ ಭ್ರಾಮಕತೆಯನ್ನು (ಬ್ರೇಕ್ ಅವೇ ಟಾರ್ಕ್) ಇಂಥ ಜೋಡಣೆ ಒದಗಿಸುತ್ತದೆ. ಸಣ್ಣದಾದ, ಸರಣಿಯಲ್ಲಿ ಸುತ್ತಿರುವ ನಿಲುಗಡೆಯಲ್ಲಿ ತನ್ನ ಗರಿಷ್ಠ ಭ್ರಾಮಕಬಲವನ್ನು ಉತ್ಪಾದಿಸುವ ವಿದ್ಯುತ್ ಮೋಟರಿನಿಂದ ಅಗತ್ಯ ಭ್ರಾಮಕಬಲ ದೊರೆಯುತ್ತದೆ. ಈ ವಿದ್ಯುತ್ ಮೋಟರಿನಲ್ಲಿ ಕಾಂತ ಚೌಕಟ್ಟು, ಕ್ಷೇತ್ರ ಸಿಂಬಿಸುತ್ತಿಕೆ (ಫೀಲ್ಡ್ ವೈಂಡಿಂಗ್). ಧ್ರುವ ಚೂರುಗಳು, ಆರ್ಮೆಚರ್, ದಿಕ್ಟರಿವರ್ತಕ (ಕಾಮ್ಯುಟೇಟರ್). ಬ್ರಷ್‍ಗಿಯರ್ ಮುಂತಾದ ಭಾಗಗಳಿವೆ. ಮೋಟರ್ ಸುಮಾರು 1000 ಡಿಠಿm (ಮಿನಿಟಿಗೆ ಷರಿಭ್ರಮಣೆಗಳು) ಜವದಲ್ಲಿ ಓಡುವಾಗ ಗರಿಷ್ಠ ಶಕ್ತಿಯನ್ನು ಉತ್ಪಾದಿಸುತ್ತದೆ. ಆದರೆ ಎಂಜಿನ್ನುಗಳ ತಿರುಗಣಿ ಜನ ಸಾಮಾನ್ಯವಾಗಿ 75-100. ಈ ಕಾರಣಕ್ಕಾಗಿ ಪ್ರವರ್ತಕ ಮೋಟರ್ ಮತ್ತು ಎಂಜಿನ್ನಿನ ನಡುವೆ ಕ್ಷೀಣಕರಣ ಗಿಯರು (ರಿಡಕ್ಷನ್ ಗಿಯರ್) ಅಗತ್ಯ.

	ಪ್ರವರ್ತಕ ಮೋಟರುಗಳಲ್ಲಿ ಇನ್‍ಬೋರ್ಡ್ ಮತ್ತು ಔಟ್‍ಬೋರ್ಡ್ ಎಂದು ಎರಡು ವಿಧ. ಮೊದಲನೆಯದರಲ್ಲಿ ಗತಿಪಾಲಕ ಚಕ್ರವನ್ನು (ಫ್ಲೈವ್ಹೀಲ್) ಕ್ರಿಯೋದ್ಯುಕ್ತವಾಗಿಸಲು (ಎನ್‍ಗೇಜ್) ಪ್ರವರ್ತಕದತ್ತ ಪಿನಿಯನ್ ಒಳಕ್ಕೆ ಚಲಿಸುತ್ತದೆ. ಎರಡನೆಯ ವಿಧದಲ್ಲಿ ಪಿನಿಯನ್ ಪ್ರವರ್ತಕದಿಂದ ಹೊರಕ್ಕೆ ಚಲಿಸುತ್ತದೆ. ಪ್ರತಿಜ್ವಲನ (ಬ್ಯಾಕ್‍ಫೈರಿಂಗ್) ಅಥವಾ ಪಿನಿಯನ್ ಸೇರಿಕೆ (ಮೆಶ್) ಆದಾಗ ಎಂಜಿನ್ ಪ್ರತಿಜ್ವಲನೆಗೊಳ್ಳುವುದರಿಂದ ಗತಿಪಾಲಕ ಚಕ್ರ ತಪ್ಪುದಿಕ್ಕಿನಲ್ಲಿ ತಿರುಗುತ್ತಿರುವಾಗ ಪ್ರವರ್ತಕ ಪಿನಿಯನ್ನನ್ನು ಪುನಃ ಕ್ರಿಯೋದ್ಯುಕ್ತವಾಗಿಸುವ ಪ್ರಯತ್ನಗಳಿಂದ ಅಪಾಯ ಒದಗಬಹುದು. ಈ ರೀತಿಯ ಆತಂಕಮಯ ತ್ರಾಸಗಳು (ಸ್ಟ್ರೆಸಸ್) ಪ್ರತಿಜ್ವಲನ ಮುಂತಾದವುಗಳ ಪರಿಣಾಮಗಳನ್ನು ತಡೆಗಟ್ಟಲು ರಬ್ಬರ್ ಚಾಲನೆಯನ್ನು (ಡ್ರೈವ್) ಉಪಯೋಗಿಸಲಾಗುವುದು.

	ದೊಡ್ಡ ದೊಡ್ಡ ವಾಣಿಜ್ಯವಾಹನಗಳಲ್ಲಿ ತೋರಿಬರುವ ಹೆಚ್ಚಿನ ಹೊರೆಗಳನ್ನು ಎದುರಿಸಬೇಕಾದಾಗ ಅಕ್ಷೀಯ ಪ್ರವರ್ತಕವನ್ನು (ಆ್ಯಕ್ಸಿಯಲ್ ಸ್ಟಾರ್ಟರ್) ಉಪಯೋಗಿಸಲಾಗುವುದು. ಅದರ ಧಾರಕಗಳಲ್ಲಿ (ಬ್ಯಾರಿಂಗ್ಸ್) ಆರ್ಮೆಚರ್ ಪಾಶ್ರ್ವ ದಿಕ್ಕಿನಲ್ಲಿ ಜಾರಬಹುದಾದ್ದರಿಂದ ಇದಕ್ಕೆ ಈ ಹೆಸರು. ಪ್ರಜ್ವಲನ ಸ್ವಿಚ್, ಪ್ರವರ್ತನ ಸ್ವಿಚ್, ಜೋಕ್ ಮುಂತಾದವು ಪ್ರವರ್ತಕ ಪರಿಕರಗಳು.

	ಸ್ವಯಂಚಲಿ ಎಂಜಿನ್ನನ್ನು ಪ್ರವರ್ತಿಸುವಾಗ ಕೆಳಗಿನ ಅಂಶಗಳು ಗಮನದಲ್ಲಿರಬೇಕು.

	1 ಎಂಜಿನ್ನನ್ನು ಪ್ರವರ್ತಿಸುವ ಮುನ್ನ ವಾಹನ ಚಲಿಸದಂತೆ ಇರಲು ಕೈತಡೆಯನ್ನು (ಹ್ಯಾಂಡ್ ಬ್ರೇಕ್) ಹಾಕಬೇಕು.

	2 ಎಂಜಿನ್ನನ್ನು ಗಿಯರ್ ಪೆಟ್ಟಿಗೆಯಿಂದ ಬೇರ್ಪಡಿಸಲು ಕ್ಲಚ್ ಪೆಡಲನ್ನು ಒತ್ತಬೇಕು. ಇದರಿಂದ ಪ್ರವರ್ತಕ ಮೋಟರಿನ ಮೇಲೆ ಬೀಳುವ ಹೆಚ್ಚಿನ ಹೊರೆ ತಗ್ಗುತ್ತದೆ.

	3 ಗಿಯರ್ ಸನ್ನೆಕೋಲು ತಟಸ್ಥಸ್ಥಿತಿಯಲ್ಲಿ ಇರಬೇಕು.

	4 ಪ್ರಜ್ವಲನ ಸ್ವಿಚ್ ಹಾಕುವುದರಿಂದ ವಿದ್ಯುತ್ತು ಪ್ರಜ್ವಲನ ವಿಭಾಗಕ್ಕೆ ಪ್ರವಹಿಸುತ್ತದೆ.

	5 ಪ್ರವರ್ತನ ಸ್ವಿಚ್ ಒತ್ತಿ ವಿದ್ಯುತ್ತು ಪ್ರವರ್ತನ ಮೋಟರಿನಲ್ಲಿ ಪ್ರವಹಿಸುವಂತೆ ಮಾಡಬೇಕು.

	6 ಎಂಜಿನ್ ಚಲನೆಯನ್ನು ಆರಂಭಿಸಿದ ಕೂಡಲೇ ಅದರ ವೇಗವನ್ನು ನಿಧಾನವಾಗಿ ಹೆಚ್ಚಿಸಬೇಕು. ಅದೇ ವೇಳೆ ಒತ್ತಿಹಿಡಿದಿರುವ ಕ್ಲಚ್‍ಪೆಡಲನ್ನು ನಿಧಾನವಾಗಿ ಮುಕ್ತಗೊಳಿಸಬೇಕು.

	7 ಆದರೆ ಎಂಜಿನ್ನಿನ ಪ್ರವರ್ತನೆಯಲ್ಲಿ ಕೆಲವೊಮ್ಮೆ ತೊಂದರೆಗಳನ್ನು ಗಮನಿಸುತ್ತೇವೆ. ಇವುಗಳ ಕಾರಣ ಎಂಜಿನ್ ಭಾಗಗಳ ದೋಷಗಳು ಅಥವಾ ಯಾಂತ್ರಿಕ ದೋಷಗಳು ಅಥವಾ ಇತರ ರೀತಿಯ ದೋಷಗಳು. ಆಗ ದೋಷ ಎಲ್ಲಿದೆ ಎಂದು ಪತ್ತೆಹಚ್ಚಿ ಸರಿಪಡಿಸಿ ಅನಂತರ ಪ್ರವರ್ತಿಸಬೇಕಾಗುತ್ತದೆ.

	ನಿಯಂತ್ರಣ : ಎಂಜಿನ್ ಪ್ರವರ್ತಿಸಲ್ಪಟ್ಟ ಒಡನೆ ಶಕ್ತಿಯ ಉತ್ಪಾದನೆ ಪ್ರಾರಂಭವಾಗುತ್ತದೆ. ಎಂಜಿನ್ನಿನ ಮೇಲೆ ಹೊರೆ ಹೆಚ್ಚಾದರೆ ಜವ ತಗ್ಗುತ್ತದೆ. ಕಡಿಮೆ ಆದರೆ ಜವ ಹೆಚ್ಚುತ್ತದೆ. ಆದರೆ ಹೊರೆಯ ಏರುಪೇರುಗಳು ಏನೇ ಇದ್ದರೂ ಜವ ಸ್ಥಿರವಾಗಿರಬೇಕು. ಯುಕ್ತಸಾಧಾನಗಳಿಂದ ಇದನ್ನು ನಿಯಂತ್ರಿಸಬಹುದು ಇವೇ ನಿಯಾಮಕಗಳು (ಗವರ್ನರ್ಸ್). ಮುಖ್ಯವಾಗಿ ಮೂರು ವಿಧಾವಾದ ನಿಯಂತ್ರಣಗಳನ್ನು ಇಲ್ಲಿ ಗಮನಿಸಬಹುದು.

	ಆಗಾಗ ಪ್ರಜ್ವಲನೆ ತಪ್ಪುವ ನಿಯಂತ್ರಣ (ಹಿಟ್‍ಅಂಡ್ ಮಿಸ್ ಗವರ್ನರ್ಸ್): ಈ ವಿಧಾನದಲ್ಲಿ ನಿಯಾಮಕ ಯಾವುದಾದರೂ ಒಂದು ಆವರ್ತದಲ್ಲಿ ಅಂತರ್ಗತ ಕವಾಟವನ್ನು ಮುಚ್ಚಿ ಎಂಜಿನ್ನಿಗೆ ಇಂಧನಸರಬರಾಜನ್ನು ನಿಲ್ಲಿಸುತ್ತದೆ. ಇದರಿಂದ ಶಕ್ತ್ಯುತ್ಪಾದನೆಯೂ ನಿಲ್ಲುತ್ತದೆ. ಹಿಂದಿನ ಆವರ್ತಗಳಲ್ಲಿ ಭ್ರಮಣಚಕ್ರ ಸಂಗ್ರಹಿಸಿದ ಶಕ್ತಿಯಿಂದ ಕೊಂತ ಆಡುತ್ತದೆ. ಈಗ ಎಂಜಿನ್ನಿನ ಜವ ತಗ್ಗಿರುತ್ತದೆ. ಘಾತಗಳಿಗೆ (ಸ್ಟ್ರೋಕ್ಸ್) ಹೋಲಿಸಿದಂತೆ ಶಕ್ತಿ ಹೀನ ಘಾತಗಳ ಸಂಖ್ಯೆ ಹೆಚ್ಚಿರುವುದರಿಂದ ಎಂಜಿನ್ನಿನ ದಕ್ಷತೆ ಕಡಿಮೆ ಆಗುತ್ತದೆ. ವಕ್ರದಂಡದಲ್ಲಿ ಅಸಮ ಭ್ರಾಮಕತೆ (ಟಾರ್ಕ್) ಉಂಟಾಗುತ್ತದೆ. ಸಣ್ಣ ಅನಿಲ ಎಂಜಿನ್ನುಗಳಲ್ಲಿ ಈ ಬಗೆಯ ನಿಯಂತ್ರಣವನ್ನು ಕಾಣಬಹುದು. ಇದೇ ತತ್ತ್ವವನ್ನು ಆಧರಿಸಿದ ಆದರೆ ಸ್ವಲ್ಪ ಬೇರೆ ವಿಧಾನವಿರುವ ನಿಯಂತ್ರಣವೂ ಉಂಟು. ಸಣ್ಣ ಹಗುರ ತೈಲದ ಎಂಜಿನ್ನುಗಳಲ್ಲಿ ನಿಯಾಕಮ ನಿರ್ಗಮಕವಾಟ ತೆರೆಯುವುದನ್ನು ಅಡ್ಡಿಪಡಿಸಿ ದಗ್ಧ ಅನಿಲಗಳು ಸಿಲಿಂಡರಿನಲ್ಲೇ ಉಳಿಯುವಂತೆ ಮಾಡುತ್ತದೆ. ಇದರಿಂದ ಜವ ತಗ್ಗುವತನಕ ಇವೇ ಅನಿಲಗಳ ಸಂಕೋಚನ ಮತ್ತು ವ್ಯಾಕೋಚನ ಪರ್ಯಾಯವಾಗಿ ನಡೆಯುತ್ತ ಇರುತ್ತವೆ.

	ಪರಿಮಾಣಕ ನಿಯಾಮಕತೆ (ಕ್ವಾಂಟಟೇಟಿವ್ ಗವರ್ನಿಂಗ್): ಸಿಲೀಂಡರನ್ನು ಪ್ರವೇಶಿಸುವ ಇಂಧನಮಿಶ್ರಣದ ಪರಿಮಾಣವನ್ನು ನಿಯಂತ್ರಿಸುವುದರ ಮೂಲಕ ಶಕ್ತಿಯ ಬದಲಾವಣೆಯಾಗುತ್ತದೆ. ಅಪಕೇಂದ್ರಕ ನಿಯಾಮಕಕ್ಕೆ (ಸೆಂಟ್ರೆಫ್ಯೂಗಲ್ ಗವರ್ನರ್) ಜೋಡಿಸಿರುವ ಕವಾಟ ಪ್ರದೇಶವನ್ನು ಹೆಚ್ಚು ಕಡಿಮೆ ಮಾಡಿ ನಿಯಂತ್ರಣವನ್ನು ತರುತ್ತದೆ. 

	ಗುಣಾತ್ಮಕ ನಿಯಾಮಕತೆ (ಕ್ವಾಲಿಟೇಟಿವ್ ಗವರ್ನಿಂಗ್): ಅಂತರ್ದಹನ ಎಂಜಿನ್ನುಗಳ ಕಾರ್ಯಾನಿರ್ವಹಣೆಗೆ ಇಂಧನ ವಾಯು ಮಿಶ್ರಣ ಅಗತ್ಯ. ಶಕ್ತ್ಯುತ್ಪಾದನೆ ಈ ಮಿಶ್ರಣದ ಪ್ರಮಾಣವನ್ನು ಅನುಸರಿಸಿ ಇರುತ್ತದೆ. ಇದನ್ನು ಬದಲಾಯಿಸಿ ಶಕ್ತ್ಯುತ್ಪಾದನೆಯನ್ನು ಬದಲಾಯಿಸಬಹುದು. ಮಿಶ್ರಣ ಪ್ರಮಾಣ ಬದಲಾವಣೆಗೆ ಎರಡು ಭಾಗಗಳ ಬದಲಾವಣೆ ಅಗತ್ಯವಿಲ್ಲ. ವಾಯು ಸರಬರಾಜನ್ನು ಹಾಗೆಯೇ ಉಳಿಸಿಕೊಂಡು ಸಿಲಿಂಡರನ್ನು ಪ್ರವೇಶಿಸುವ ಇಂಧನ ಪರಿಮಾಣವನ್ನು ನಿಯಂತ್ರಿಸಿದರೆ ಸಾಕು. ಈ ಬಗೆಯ ನಿಯಂತ್ರಣವನ್ನು ವಾಯುಸಂಕೋಚನವುಳ್ಳ ಭಾರ ತೈಲದ ಎಂಜಿನ್ನುಗಳಲ್ಲಿ ಕಾಣಬಹುದು.
(ಕೆ.ಆರ್.ಎಂಒ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ